ಪುಟ್ಟರಾಜ ಗವಾಯಿ

ಹಾವೇರಿ ಜಿಲ್ಲೆಯ ದೇವಗಿರಿಯಲ್ಲಿ ಜನನ ಮಾರ್ಚ 3, 1914 ರಂದು. ಅದು ತಾಯಿ ಸಿದ್ಧಮ್ಮನ ತವರೂರು. ತಂದೆ ರೇವಣಸಿದ್ಧಯ್ಯ ಅವರದು ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಹೊಸಪೇಟೆ. ಕೂಸಿಗೆ ಪುಟ್ಟಯ್ಯ ಎಂದು ನಾಮಕರಣ. ಎಂಥ ಕಾಂತಿಯುತ ಕಂಗಳು. ಆನಂದ ಆರು ತಿಂಗಳು ಮಾತ್ರ. ಕಣ್ಣು ಬೇನೆ. ತೊನಸಿಯನ್ನು ಕಣ್ಣಿಗೆ ತಾಗಿಸಿದರೆ ವಾಸಿಯಾಗುವುದೆಂದು ನಾಟಿ ವೈದ್ಯನ ಸಲಹೆ. ದುರದೃಷ್ಟ. ತೊನಸಿ ಕೈಯಿಂದ ಜಾರಿ ಕಣ್ಣಿನೊಳಗೆ ಬಿದ್ದವು. ಕಣ್ಣನ್ನೇ ತಿಂದು ಬಿಟ್ಟವು. ಪುಟ್ಟಯ್ಯ ಕುರುಡನಾದ. ಆದರೆ, ಅಂಧರ ಬಾಳಿಗೆ ಬೆಳಕಾದ.
ಪುಟ್ಟಯ್ಯ ಎರಡು ವರ್ಷದವನಿರುವಾಗ ತಂದೆಯನ್ನು ಕಳೆದುಕೊಂಡರು. ಸೋದರಮಾವ ಚಂದ್ರಶೇಖರಯ್ಯ ತಾಯಿ, ಮಗನನ್ನು ದೇವಗಿರಿಗೆ ಕರೆದೊಯ್ದು ಪಾಲಿಸಿ ಪೆÇೀಷಿಸಿದರು. ಚಂದ್ರಶೇಖರಯ್ಯ ಪಂಚಾಕ್ಷರಿ ಗವಾಯಿಗಳಲ್ಲಿ ಸಂಗೀತ ಕಲಿತಿದ್ದರು. ಪುಟ್ಟಯ್ಯನನ್ನು ದೊಡ್ಡ ಗವಾಯಿ ಮಾಡಬೇಕೆಂಬ ಆಕಾಂಕ್ಷೆ. ಅವರೇ ಪುಟ್ಟಯ್ಯನ ಪ್ರಥಮ ಗುರು. ಎಂಟು ವರ್ಷಕ್ಕೆ ಪುಟ್ಟಯ್ಯ ವಚನ, ಚೀಜು, ಮತ್ತು ತತ್ವಪದ ಹಾಡಬಲ್ಲವರಾದರು. ಹಾಡಿನ ಜೊತೆಗೇ ಹಾರ್ಮೋನಿಯಮ್ ನುಡಿಸುತ್ತಿದ್ದ ಪುಟ್ಟಯ್ಯ ಸಂಗೀತದ ಚಂದ್ರಶೇಖರಯ್ಯ ಕೌತುಕಪಟ್ಟರು. ಅವನನ್ನು ಯೋಗ್ಯ ಗುರುವಿನಡಿಯಲ್ಲಿ ಹಾಕುವ ಸಂಕಲ್ಪ. 1922ರಲ್ಲಿ ಪಂಚಾಕ್ಷರಿ ಗವಾಯಿಗಳಲ್ಲಿ ಕರೆದೊಯ್ದು ಎಲ್ಲ ವಿವರಿಸಿದರು. ಪಂಚಾಕ್ಷರಿ ಗವಾಯಿಗಳು ಆಗ ತಮ್ಮ ಸಂಚಾರಿ ಸಂಗೀತ ಶಾಲೆಯೊಂದಿಗೆ ನವಲಗುಂದದಲ್ಲಿದ್ದರು. ಒಂದು ಕ್ಷಣ ಧ್ಯಾನಿಸಿದರು. ಪುಟ್ಟಯ್ಯನನ್ನು ಸ್ವೀಕರಿಸುವರೋ ಇಲ್ಲವೋ ಎಂಬ ಆತಂಕ. ಒಂದೇ ಕ್ಷಣ. ಪಂಚಾಕ್ಷರಿ ಗವಾಯಿಗಳ ಅಂತಶ್ಚಕ್ಷು ಅರುಹಿತು, ನನ್ನ ಹೆಸರನ್ನು ಅಮರಗೊಳಿಸುವ ಶಿಷ್ಯನನ್ನು ಗುರು ಕುಮಾರೇಶ ಕಳಿಸಿರುವನು. ಪುಟ್ಟಯ್ಯನನ್ನು ಅಪ್ಪಿದರು.
ಪಾಠ ಮರುದಿನವೇ ಆರಂಭವಾಯಿತು. ಅವನಿಗೆ ವಾರದ ಮನೆ ಗೊತ್ತುಮಾಡಿದರು. ಒಂದೊಂದು ಮನೆಯಲ್ಲಿ ಆಹಾರ ಸರಿ ಇರುತ್ತಿರಲಿಲ್ಲ. ಮತ್ತೊಂದರಲ್ಲಿ ಹೊಟ್ಟೆತುಂಬ ಇರುತ್ತಿರಲಿಲ್ಲ. ಪುಟ್ಟಯ್ಯನಿಗೆ ಇತ್ತ ಗಮನವಿರಲಿಲ್ಲ. ಅವನ ಗಮನವೆಲ್ಲ ವಿದ್ಯಾರ್ಜನೆಯತ್ತ. ಲೋಕವೇ ತನ್ನ ಮನೆಯೆಂದು ಭಾವಿಸಿದ. ಮೈಮೇಲಿನ ಅರಿವೆ ಹರಿದರೆ ಅವನ್ನೇ ಗಂಟು ಹಾಕಿಕೊಂಡು ಉಡುತ್ತಿದ್ದ. ಗೊತ್ತಾಗಿ ಪಂಚಾಕ್ಷರಿ ಗವಾಯಿಗಳು ಹೊಸ ಬಟ್ಟೆ ಕೊಡಿಸುತ್ತಿದ್ದರು. ಹಿಂದುಸ್ತಾನಿ ಮತ್ತು ಕರ್ನಾಟಕಿ ಎಂಡೂ ಪದ್ಧತಿಗಳಲ್ಲಿ ನಿಷ್ಣಾತನನ್ನಾಗಿಸಿ ಪುಟ್ಟಯ್ಯನನ್ನು ತಮ್ಮಂತೆಯೆ ಉಭಯ ಗಾಯನಾಚಾರ್ಯನನ್ನಾಗಿಸಿದರು. ಪುಟ್ಟಯ್ಯ ಹಾರ್ಮೋನಿಯಮ್, ತಬಲಾ, ಸಾರಂಗಿ, ಪಿಟೀಲು ನುಡಿಸುವುದನ್ನು ಕಲಿತರು. (ಇವತ್ತಿಗೂ ಅವರ ಹಾರ್ಮೋನಿಯಮ್ ವಾದನ ಆಲಿಸಿದರೆ ಕಣ್ಣಿನಿಂದ ನೀರು ಪಳಪಳ ಉದುರುವವು.) ಸಂಗೀತದ ಜೊತೆಜೊತೆಗೆ ಸಂಸ್ಕøತ, ಕನ್ನಡ ವ್ಯಾಕರಣ, bsÀಂದಸ್ಸು, ಕಾವ್ಯ ಕಲಿಸುವ ವ್ಯವಸ್ಥೆ ಮಾಡಿದರು. ಪಂಚಾಕ್ಷರಿ ಗವಾಯಿಗಳ ಕೀರ್ತನ ಕಾರ್ಯಕ್ರಮ ಕೇಳುತ್ತ ಕೇಳುತ್ತ ಕೀರ್ತನ ಕಲೆಯನ್ನು ಕರಗತ ಮಾಡಿಕೊಂಡ ಪುಟ್ಟಯ್ಯ. ಅಂಧರ ಬ್ರೇಲ್ ಲಿಪಿಯನ್ನು ಕಲಿತುಕೊಂಡ. ನಂತರ ಹಿಂದಿ ಭಾಷೆ ಕಲಿತ. ಗುರು ಪಂಚಾಕ್ಷರಿ ಗವಾಯಿಗಳಿಂದ ಕಟ್ಟುನಿಟ್ಟಾದ ಬ್ರಹ್ಮಚರ್ಯ, ಶಿವಪೂಜಾ ನಿಷ್ಠೆ ಮತ್ತು ಸೇವಾ ದೀಕ್ಷೆ ಮೈಗೂಡಿಸಿಕೊಂಡು ಪುಟ್ಟಯ್ಯ ಪುಟ್ಟರಾಜ ಗವಾಯಿಯಾದರು.
ಸಿದ್ದಮ್ಮ ಒಮ್ಮೆ ಪುಟ್ಟರಾಜ ಗವಾಯಿಗಳಲ್ಲಿಗೆ ಬಂದು, “ಮಗಾ, ನನಗೂ ಮುಪ್ಪಾಗಿದೆ. ಯಾರೂ ಇಲ್ಲದ ಒಂಟಿ ಜೀವ. ನಡಿ, ಮನೆಗೆ ಹೋಗೊಣ” ಎಂದು ಕರೆದಳು. “ಹಡೆದವ್ವ, ನಾನು ಲೋಕದ ಬಂಧನ ಕಿತ್ತು ಹಾಕಿರುವೆ. ನನಗೀಗ ಗುರುಗಳೇ ತಂದೆ ತಾಯಿ. ಅವರ ಮಣಿಹಕ್ಕೆ ನಾನು ಅಣಿಯಾಗಬೇಕು”. ಪಂಚಾಕ್ಷರಿ ಗವಾಯಿಗಳಿಗೆ ಶಿಷ್ಯನ ಆಂತರ್ಯ ಗೊತ್ತಿತ್ತು. ಈಗ ಅದು ದೃಢಪಟ್ಟು ಸಂತೋಷಪಟ್ಟರು.
ದೊಡ್ಡ ಸಂಗೀತಗಾರರಾಗಿ ಮಾತ್ರವಲ್ಲದೆ ಪುಟ್ಟರಾಜ ಗವಾಯಿಗಳು ದೊಡ್ಡ ವಿದ್ವಾಂಸರಾಗಿಯೂ ಬೆಳೆದರು. ಅವರು ಬ್ರೇಲ್ ಲಿಪಿಯಲ್ಲಿ ಬರೆಯುತ್ತಾರೆ. ಇಲ್ಲವೆ ಅವರು ಹೇಳುತ್ತ ಹೋಗುವುದನ್ನು ಇನ್ನೊಬ್ಬರು ಬರೆದುಕೊಳ್ಳುತ್ತಾರೆ. ಅವರ ಸಾಹಿತ್ಯ ಕೃಷಿ ಅಗಾಧ. 13 ಪುರಾಣಗಳು, 12 ನಾಟಕಗಳು, 19 ಇತರ ಪ್ರಕಾರದ ಕೃತಿಗಳು, 15 ಕೃತಿಗಳು ಪ್ರಕಟಣೆಗೆ ಸಿದ್ಧವಿವೆ. ಅವರು ಹಿಂದಿಯಲ್ಲಿ ರಚಿಸಿದ ಬಸವ ಪುರಾಣ ಬಾಬು ರಾಜೇಂದ್ರ ಪ್ರಸಾದರ ಗಮನ ಸೆಳೆಯಿತು. ಅದರ ಕರ್ತೃ ಅಂಧರೆಂದು ತಿಳಿದು ಅವರನ್ನು ನೋಡಬಯಸಿದರು. ಕೊಪ್ಪಳ ಕ್ಷೇತ್ರದ ಸಂಸದ ಅಗಡಿ ಸಂಗಣ್ಣ ಭೇಟಿ ಏರ್ಪಾಡು ಮಾಡಿದರು. ಪುಟ್ಟರಾಜ ಗವಾಯಿ ರಾಷ್ಟ್ರಪತಿ ಭವನಕ್ಕೆ ಆಗಮಿಸಿದರು. ಸಂತೋಷಗೊಂಡು ರಾಷ್ಟ್ರಪತಿ ಕೇಳಿದರು, “ನಿಮಗೇನಾದರೂ ಸಹಾಯ ಬೇಕಿದ್ದರೆ ಹೇಳಿರಿ”. ಇನ್ನೊಬ್ಬರಾಗಿದ್ದರೆ ಕುಣಿದಾಡುತ್ತಿದ್ದರು; “ನಮ್ಮ ಅಂಧರ ಶಾಲೆ ಕಷ್ಟದಲ್ಲಿ ನಡೆಯುತ್ತಿದೆ. ಧನ ಸಹಾಯ ನೀಡಿರಿ” ಎಂದು ಕೇಳುತ್ತಿದ್ದರು. ಆದರೆ ಪುಟ್ಟರಾಜ ಗವಾಯಿಗಳು ಭಿನ್ನ ಲೋಹದಿಂದ ಮಾಡಲ್ಪಟ್ಟವರು. “ನನಗೇನೂ ಬೇಡ. ನಿಮ್ಮ ಮೆಚ್ಚುಗೆ ಸಾಕು” ಎಂದುಬಿಟ್ಟರು. ರಾಷ್ಟ್ರಪತಿಗಳಿಗೆ ಪರಮಾಶ್ಚರ್ಯ. 
ಪಂಚಾಕ್ಷರಿ ಗವಾಯಿಗಳ ಸಂಗೀತ ಶಾಲೆ ಆರ್ಥಿಕ ತೊಂದರೆಗೊಳಗಾಯಿತು. ಪುಟ್ಟರಾಜ ಗವಾಯಿಗಳ ಸಲಹೆಯನ್ವಯ ಶ್ರೀ ಕುಮಾರೇಶ್ವರ ಕೃಪಾ ಪೆÇೀಷಿತ ನಾಟಕ ಸಂಘ ಸ್ಥಾಪಿಸಿದರು. ಅದು ಗವಾಯಿಗಳ ಕಂಪನಿ ಎಂದೇ ಹೆಸರಾಯಿತು. ಸೊಲ್ಲಾಪುರದ ಶ್ರೀ ಸಿದ್ದರಾಮೇಶ್ವರ ನಾಟಕ ಬರೆದು ನಿರ್ದೇಶಿಸಿದವರು ಪುಟ್ಟರಾಜ ಗವಾಯಿ. ನರಗುಂದದಲ್ಲಿ ಆರಂಭ. ಪ್ರಥಮ ಪ್ರಯೋಗ ಒಂದು ಸಾವಿರ ರೂಪಾಯಿ ತಂದಿತು. ಅದು ಅಂದು ದೊಡ್ಡ ಮೊತ್ತ. ಪುಟ್ಟರಾಜ ಗವಾಯಿಗಳ ಸತಿ ಸುಕನ್ಯಾ ನಾಟಕ ನೋಡಿ ರಂಗ ನಟ ಹಂದಿಗನೂರ ಸಿದ್ಧರಾಮಪ್ಪ ಸಂತೋಷಪಟ್ಟು ಒಂದು ನೂರು ರೂಪಾಯಿ ಆಹೇರ ಮಾಡಿದರು. ಕನ್ನಡದ ಶೇಕ್ಸ್‍ಪಿಯರ್ ಎಂದೇ ಹೆಸರಾದ ಕಂದಗಲ್ಲ ಹನುಮಂತರಾವ ಈ ನಾಟಕ ಬರೆದವರಾರು ಎಂದು ವಿಚಾರಿಸಿದರು. ಅಂಧ ಪುಟ್ಟರಾಜ ಗವಾಯಿಗಳೆಂದು ತಿಳಿದು ಟಾಂಗಾ ಕೊಟ್ಟು ಅವರನ್ನು ಕರೆಕಳಿಸಿದರು. ಆ ನಾಟಕದ ಭಾಷೆ, ಪಾತ್ರಚಿತ್ರಣ, ರಂಗತಂತ್ರಗಳನ್ನು ಮನಸಾರೆ ಹೊಗಳಿ ಐವತ್ತು ರೂಪಾಯಿ ಆಹೇರ ಮಾಡಿದರು.
ಒಮ್ಮೆ ಗವಾಯಿಗಳ ಕಂಪನಿಯ ಕ್ಯಾಂಪ್ ಕೊಪ್ಪಳದಲ್ಲಿ. ಸತ್ಯ ಸಂಕಲ್ಪ ನಾಟಕ. ಉದ್ಘಾಟನೆಗೆ ಪಂಚಾಕ್ಷರಿ ಗವಾಯಿಗಳು ಬಂದಿದ್ದರು. ಪ್ರೇೀಕ್ಷಕರಿಗೆ ಪುಟ್ಟರಾಜ ಗವಾಯಿಗಳ ಹಾರ್ಮೋನಿಯಮ್ ಮತ್ತು ಪಂಚಾಕ್ಷರಿ ಗವಾಯಿಗಳ ತಬಲಾ ಕೇಳುವ ತವಕ. ನಾಟಕಮಧ್ಯೆ ಒಂದರ್ಧ ಘಂಟೆ ಸಂಗೀತ ಕಾರ್ಯಕ್ರಮ ಏರ್ಪಡಿಸಿದರು. ಅರ್ಧ ಘಂಟೆ ಎಂದುದು ಎರಡು ತಾಸಾಯಿತು. ಪುಟ್ಟರಾಜ ಗವಾಯಿ ಪೂರಿಯಾ ಧನಶ್ರೀ ರಾಗವನ್ನು ಎರಡು ತಾಸು ನುಡಿಸಿದರು. ಶಿಷ್ಯನ ಸಂಗೀತ ಪ್ರೌಢಿಮೆಯಿಂದ ಪುಳಕಿತಗೊಂಡ ಪಂಚಾಕ್ಷರಿ ಗವಾಯಿಗಳು ಕುಳಿತಲ್ಲಿಯೆ ಕುಪ್ಪಳಿಸುತ್ತ ತಬಲಾ ನುಡಿಸಿದರು. ಆನಂದಸಾಗರದಲ್ಲಿ ಮುಳುಗಿದ್ದ ಶ್ರೋತೃಗಳಿಗೆ ಸಮಯದ ಪರಿವೆಯೆ ಇರಲಿಲ್ಲ. ಶ್ರೋತೃಗಳಲ್ಲಿ ಕೆಲವರು ಅಭಿನಂದಿಸ ಹೋದರೆ ಪುಟ್ಟರಾಜ ಗವಾಯಿಗಳು, “ಇದರಲ್ಲಿ ನನ್ನದೇನೂ ಇಲ್ಲ. ಎಲ್ಲವೂ ಗುರು ಪಂಚಾಕ್ಷರಿ ಗವಾಯಿಗಳ ಕೃಪೆ” ಎಂದು ವಿನಯದಿಂದ ನುಡಿದರು.
ಪುಟ್ಟರಾಜ ಗವಾಯಿಗಳು ತಯಾರಿಸಿದ ಶಿಷ್ಯರು ಲೆಕ್ಕವಿಲ್ಲದಷ್ಟು. ಶ್ರೇಷ್ಠ ಸಂಗೀತಗಾರರಾಗಿರುವುದಲ್ಲದೆ ಪುಟ್ಟರಾಜ ಗವಾಯಿಗಳು ಶ್ರೇಷ್ಠ ಸಂಗೀತಜ್ಞರು. ಹಾಗೂ ವಾಗ್ಗೇಯಕಾರರು ಕೂಡ. ತಮ್ಮ ಸಂಗೀತಶಾಸ್ತ್ರ e್ಞÁನ ಗ್ರಂಥದಲ್ಲಿ ನಾದದ ಹುಟ್ಟು, ಓಂಕಾರ ಮತ್ತು ಸ್ವರಗಳನ್ನು ಚರ್ಚಿಸುತ್ತ ಆಧ್ಯಾತ್ಮ ಮತ್ತು ಸಂಗೀತಗಳ ಬೆಸುಗೆ ಸಾಧಿಸಿದ್ದಾರೆ. ಅವರ ಇನ್ನೊಂದು ಮಹತ್ತರ ಕೃತಿ ಗಾನಸುಧಾ 1 ಮತ್ತು 2. ಅದರಲ್ಲಿ 66 ರಾಗಗಳಿಗೆ ಸ್ವಂತ ಚೀಜುಗಳನ್ನು ರಚಿಸಿದ್ದಾರೆ. ತಮ್ಮದೇ ಸ್ವರಲಿಪಿ ಪದ್ಧತಿ ರೂಪಿಸಿ ಅದಕ್ಕೆ ಪಂಚಾಕ್ಷರಿ ಸ್ವರಲಿಪಿ ಎಂದು ಹೆಸರಿಟ್ಟಿರುವರು. 
ತುಲಾಭಾರ ಒಂದು ಭಾರತೀಯ ಸಂಪ್ರದಾಯ. ಎಂಥೆಂಥವರಿಗೂ ನಾಲ್ಕೆಂಟು ತುಲಾಭಾರಗಳಾದರೆ ಹೆಚ್ಚಾಯಿತು. ಆದರೆ, ಪುಟ್ಟರಾಜ ಗವಾಯಿಗಳ ತುಲಾಭಾರಗಳು ಸಾವಿರ ಸಂಖ್ಯೆಯನ್ನು ಮೀರಿವೆ. ಸಮಾಜದಲ್ಲಿ ಅವರಿಗೆ ಅಷ್ಟೊಂದು ಭಕ್ತಿ. ಅದು ಗಿನೆಸ್ ದಾಖಲೆ ಸೇರಬೇಕಾದ ವಿಕ್ರಮ. ಪುಟ್ಟರಾಜ ಗವಾಯಿಗಳಿಗೆ ಬಂದ ಪದವಿಗಳು ಅಸಂಖ್ಯ ಉಭಯ ಗಾಯನಾಚಾರ್ಯ, ತ್ರಿಭಾಷಾ ಕವಿ, ಗಾನಯೋಗಿ, ವಿದ್ಯಾವಾಚಸ್ಪತಿ. ಪ್ರಶಸ್ತಿಗಳು ಹತ್ತು ಹಲವು ರೋಟರಿ ಸಂಸ್ಥೆಯ ಅಂತರರಾಷ್ಟ್ರೀಯ ಪಾಲ್ ಹ್ಯಾರಿಸ್ ಗೌರವ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ, (1975) ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ಗೌರವ ಫೆಲೋಶಿಪ್, (1996-98) ಕರ್ನಾಟಕ ಸರಕಾರದ ಅತ್ಯುನ್ನತ ಸಂಗೀತ ಗೌರವವಾದ ಕನಕಪುರಂದರ ಪ್ರಶಸ್ತಿ, (1998) ಕರ್ನಾಟಕ ಸರಕಾರದ ರಾಷ್ಟ್ರೀಯ ಬಸವ ಪುರಸ್ಕಾರ, (2003). ಯಾವ ಪ್ರಶಸ್ತಿಯೂ ಅವರ ಸಾಧನೆಯ ಘನತೆಗೆ ದೊಡ್ಡದಲ್ಲ. ಪುಟ್ಟರಾಜ ಗವಾಯಿಗಳ ಶಿಷ್ಯರು, ಅಭಿಮಾನಿಗಳು 1999ರಲ್ಲಿ ಪುಟ್ಟರಾಜ ಸಮ್ಮಾನ ಎಂಬ ಅಖಿಲ ಭಾರತ ಸಂಗೀತ ಪ್ರಶಸ್ತಿಯನ್ನು ಆರಂಭಿಸಿರುವರು.
ಪಂಚಾಕ್ಷರಿ ಗವಾಯಿಗಳು ಮತ್ತು ಪುಟ್ಟರಾಜ ಗವಾಯಿಗಳದು ಒಂದು ಅದ್ಭುತ ಗುರುಶಿಷ್ಯ ಜೋಡಿ. ಒಬ್ಬರಿಗೆ ಇನ್ನೊಬ್ಬರು ಹೇಳಿ ಮಾಡಿಸಿದಂಥವರು. ಈರ್ವರೂ ಅಂಧರು. ಈರ್ವರೂ ಅಂಧತ್ವಕ್ಕೆ ಸವಾಲೆಸೆದವರು. ಜಗತ್ತಿಗೆ ಬೆಳಕಾದವರು. ಈರ್ವರದೂ ಮಹತ್ತಾದ ಸಂಗೀತ ಸಾಧನೆ. ಈರ್ವರದೂ ಮನುಕುಲಕ್ಕೆ ಅರ್ಥವತ್ತಾದ ಸೇವೆ. ಪಂಚಾಕ್ಷರಿ ಗವಾಯಿಗಳ ಸಮರ್ಥ ಉತ್ತರಾಧಿಕಾರಿಗಳಾಗಿರುವ ಪುಟ್ಟರಾಜ ಗವಾಯಿಗಳು 90ರ ವಯಸ್ಸಿನಲ್ಲೂ ದಣಿವರಿಯದ ಚೇತನ.
ಗದುಗಿನ ವೀರೇಶ್ವರ ಪ್ಯಣ್ಯಾಶ್ರಮ ಪಂಚಾಕ್ಷರಿ ಗವಾಯಿಗಳು ಸ್ಥಾಪಿಸಿದ ವಿದ್ಯಾದಾನ ಕೇಂದ್ರ. 1944ರಲ್ಲಿ ಪಂಚಾಕ್ಷರಿ ಗವಾಯಿಗಳು ನಿಧನರಾದ ಮೇಲೆ ಪುಟ್ಟರಾಜ ಗವಾಯಿ ಉತ್ತರಾಧಿಕಾರಿಯಾದರು. ಅವರ ನೇತೃತ್ವದಲ್ಲಿ ಬಹು ವಿಧವಾಗಿ ಆಶ್ರಮ ಬೆಳೆದಿದೆ. ಬೃಹತ್ ಕಟ್ಟಡಗಳು ತಲೆ ಎತ್ತಿವೆ. ಇಂದು ಆಶ್ರಮದಲ್ಲಿ ಸುಮಾರು 600 ಬಡ ವಿದ್ಯಾರ್ಥಿಗಳುz ಅವರಲ್ಲಿ 150 ಅಂಧರು, 75 ಅಂಗವಿಕಲರು. ಜಾತಿ ವಿಜಾತಿ ಎಂಬುದಿಲ್ಲ. ಅವರಿಗೆಲ್ಲ ಅನ್ನದಾನ ಮತ್ತು ವಿದ್ಯಾದಾನ. ದಿನಾಲು 450 ಜನರಿಗೆ ಅನ್ನ ನೀಡುವುದು ಹರ ಸಾಹಸವೇ ಸರಿ.
ಸಾಮಾನ್ಯ ಶಿಕ್ಷಣದ ಜೊತೆಗೆ ಸಂಗೀತ ಶಿಕ್ಷಣ. ಗಾಯನ, ತಬಲಾ, ವಾಯಲಿನ್, ಹಾರ್ಮೋನಿಯಮ್ ಬೋಧನೆ. ಕರ್ನಾಟಕ ರಾಜ್ಯದ ವಿದ್ವತ್ ಪರೀಕ್ಷೆ ಮತ್ತು ಗಂಧರ್ವ ಮಹಾವಿದ್ಯಾಲಯದ ವಿಶಾರದ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಲಾಗುತ್ತಿದೆ. ಅವರು ತಮ್ಮ ಕಾಲ ಮೇಲೆ ತಾವು ನಿಂತಕೊಳ್ಳಲೆಂಬ ಪ್ರಯತ್ನ.
ವೀರೇಶ್ವರ ಪ್ಯಣ್ಯಾಶ್ರಮದಡಿ ನಡೆಯುತ್ತಿರುವ ಸಂಸ್ಥೆಗಳು ಹಲವು ಅಂಧರ ವಸತಿ ಶಾಲೆ, ಸಂಸ್ಕøತ ಪಾಠ ಶಾಲೆ, ಸಂಗೀತ ಪಾಠಶಾಲೆ, ಪ್ರಾಥಮಿಕ ಶಾಲೆ, ಹೈಸ್ಕೂಲು, ಆಟ್ರ್ಸ್ ಕಾಲೇಜು, ಸಂಗೀತ ಕಾಲೇಜು. ಡಾ. ರಾಜಕುಮಾರ ತಮ್ಮ ರಾಜಕುಮಾರ ನೈಟ್ ಕಾರ್ಯಕ್ರಮ ನೀಡಿ ವೀರೇಶ್ವರ ಪುಣ್ಯಾಶ್ರಮಕ್ಕೆ ಲಕ್ಷಾಂತರ ರೂಪಾಯಿ ಸಂಗ್ರಹಿಸಿಕೊಟ್ಟರು. ಗದುಗಿನ ಹೊರವಲಯದಲ್ಲಿ 80 ಲಕ್ಷರೂ. ವೆಚ್ಚದಲ್ಲಿ ನಿರ್ಮಿತವಾಗುತ್ತಿರುವ ಕಟ್ಟಡಕ್ಕೆ ಇವುಗಳಲ್ಲಿ ಕೆಲವು ಸ್ಥಳಾಂತರಗೊಳ್ಳಲಿವೆ.		(ಶ್ರೀಕೃಪಾ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ